ಇಂಡಿಯನ್ ರೋಡ್ಸ್ ಕಾಂಗ್ರೆಸ್

ಭಾರತೀಯ ರಸ್ತೆಗಳನ್ನು ಅಭಿವೃದ್ಧಿ ಪಡಿಸುವುದು ಮತ್ತು ರಸ್ತೆ ಸಾರಿಗೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ತಾಂತ್ರಿಕ ಪರಿಹಾರ ಸೂಚಿಸುವುದು ಈ ಸಂಸ್ಥೆಯ ಮುಖ್ಯ ಉದ್ದೇಶ. ಸ್ಥಾಪನೆ 1934. ಕೇಂದ್ರ ಕಾರ್ಯಾಲಯ ನವದೆಹಲಿಯಲ್ಲಿದೆ. ಇದು ಪ್ರತಿವರ್ಷ ಒಂದು ಮಹಾ ಅಧಿವೇಶನ ನಡೆಸುವುದು. ಇದರಲ್ಲಿ ರಾಷ್ಟ್ರಾದ್ಯಂತ 150ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುವರು. ಇದರ ಸಾಮಾನ್ಯ ಅಧಿವೇಶನಗಳಲ್ಲಿ ತಾಂತ್ರಿಕ ವಿಷಯಗಳನ್ನು ಕುರಿತ ಚರ್ಚೆ ನಡೆಯುತ್ತದೆ. ಅಧ್ಯಯನ ನಡೆಸಿ ಸಿದ್ಧಪಡಿಸಲಾದ ಪ್ರಬಂಧಗಳನ್ನು ಸಮ್ಮೇಳನದಲ್ಲಿ ಓದಲಾಗುವುದು. ಇದರ ಪ್ರಮುಖ ಕಾರ್ಯಗಳನ್ನು ಸಂಬಂಧಿಸಿದ ಸಮಿತಿ, ಉಪಸಮಿತಿ ನಿರ್ವಹಿಸುವುವು. ಇವು ಮುಖ್ಯವಾಗಿ ಎಂಜನಿಯರುಗಳ ಶಿಕ್ಷಣ, ಕೊಳ್ಳುಕೊಡು ಪ್ರಶ್ನೆ, ಕಲೆಯ ದೃಷ್ಟಿಯಿಂದ ರಸ್ತೆಗಳ ನಿರ್ಮಾಣ ಮೊದಲಾದವುಗಳನ್ನು ಒಳಗೊಂಡಿವೆ. ಜರ್ನಲ್ ಎಂಬ ತ್ರೈಮಾಸಿಕವನ್ನು ಟ್ರಾನ್ಸ್‍ಪೋರ್ಟ್ ಕಮ್ಯುನಿಕೇಷನ್ ಮಂತ್ಲಿ ರಿವ್ಯೂ ಎಂಬ ಮಾಸಿಕವನ್ನು ಇದು ಪ್ರಕಟಿಸುತ್ತಿದೆ. ರಸ್ತೆಗಳ ನಿಯಮ ಕುರಿತು ಲಘುಹೊತ್ತಿಗೆಗಳನ್ನು (ಬುಲೆಟಿನ್) ಪ್ರಕಟಿಸುತ್ತಿದೆ. ಸಂಸ್ಥೆಗೆ ಒಂದು ಸುಸಜ್ಜಿತ ಗ್ರಂಥಭಂಡಾರ ಇದೆ. ರಸ್ತೆ ನಿರ್ಮಾಣ ಕುರಿತು ಎಂಜನಿಯರುಗಳಿಂದ ಬಂದ ಪ್ರಶ್ನೆಗಳಿಗೆ ಈ ಸಂಸ್ಥೆ ಉತ್ತರಿಸುತ್ತದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ